ಬುಧವಾರ, ಏಪ್ರಿಲ್ 20, 2011

ಶಕುಂತಲೆಗೆ ಮದುವೆ ಎರಡು



·         ರವಿ ಮೂರ್ನಾಡ್‍
ನಮ್ಮ ಹುಡುಗಿಗೆ ನಿಮ್ಮ ಹಾಗೆಯೇ
ನಡೆದಿದೆ ಮಂಟಪದಲಿ ಮದುವೆ.
ಒಂದಲ್ಲ.... ಎರಡು..
ಜೊತೆ ಸಾಕ್ಷಿಗೆ ಮಗು.
ಮದುವೆಗೆ ಬಂದ ಜನರು
ಮನೆ-ಮನೆಗೆ ಹಂಚಿದ ಕರೆಯೋಲೆಗಳು..!

ಕಥೆ ಹೇಳುತ್ತೇನೆ...
ಒಂದೂರಿನಲ್ಲಿ ಒಬ್ಬ ಸೂಟುಧಾರಿ
ಮದುವೆ ಪಲ್ಲಂಗದ ಮೇಲೆ
ಮುಡಿಯಿಂದ ಜಾರಿದ ಹೂವು.
ಎದೆಗೆ ಅಂಟಿಸಿದ ಭಾಂಧವ್ಯದ ಹೊನಲು
ಪಿಸುಗುಟ್ಟಿದ ಸಾವಿರ ರಾತ್ರಿಯಿಂದ
ತಾಳಿಯ ಶವಯಾತ್ರೆಯ ದಿನ
ಪಿಂಡಕ್ಕೆ ವರ್ಷ ಒಂದು.!
ಕೋರ್ಟು-ಕಛೇರಿಗೆ ತೋರಣ ಕಟ್ಟಿ
ಕಟಕಟೆಯ ಮುಂದೆ ತಗ್ಗಿಸಿದ ಮುಖ
ವಿವಾಹ ವಿಚ್ಛೇದನ ಸಮಾರಂಭ
ನ್ಯಾಯದೇವತೆಯ ಬಟ್ಟೆ ಕಳಚಿದ
ಆತ್ಮಸಾಕ್ಷಿಯ ಅತ್ಯಾಚಾರಿ....!

ಇನ್ನೊಂದು ಕಥೆ ಹೇಳುತ್ತೇನೆ...
ನಿಮ್ಮ ಪಕ್ಕದ ಊರಿನಲ್ಲಿ ತಿರುಗುತ್ತಿದ್ದ
ಒಬ್ಬ ಅಪಪೋಲಿ ಬೀದಿ ಭಿಕಾರಿ
ಮೋಹ-ಆಸೆ-ಕಾಮದ ವರ್ತಕ
ಸಿಂಗರಿಸಿದ ವಿಚ್ಚೇಧಿತ ಹುಡುಗಿಗೆ
ಮುರುಕು ಮಂಚದ ಆಸರೆ
ಮುಸುರೆ ತಿಕ್ಕಿ ಮಾಸಿದ ಹಸ್ತರೇಖೆ
ಮೋಹದ ಸೆಲೆ ಬತ್ತಿದ ಮೇಲೆ
ಹಾದರಕೆ ಇನ್ನೊಂದು ಹೆಸರು ಮದುವೆ..!

ಇವಳ ಕಥೆ ಬಿಡಿ
ಶಕುಂತಲೆಗೆ ಏನಾಯಿತು?
ದುಷ್ಯಂತ ಮೋಹದ ಬಲೆ
ಕೈಬೆರಳ ಉಂಗುರ
ಅವಳಾದರೋ ಅವನ ಕರ್ಪೂರದ ಬೊಂಬೆ
ಇವಳಾದರೋ ಇಬ್ಬರು ಅತ್ಯಾಚಾರಿಗಳು
ಸುಲಿದಿಟ್ಟ ಮಾವಿನ ಸಿಪ್ಪೆ
ಬರೆದಿಟ್ಟ ಪುಟ್ಟ ಕವಿತೆಯಲಿ
ನಮ್ಮ ಶಕುಂತಲೆಗೆ ಮದುವೆ ಎರಡು..!
------------------------------------------------------

7 ಕಾಮೆಂಟ್‌ಗಳು:

  1. ಇದು ನನಗಿಷ್ಟದ ಕವಿತೆ. ಗಟ್ಟಿಯಾಗಿದೆ. ಧನ್ಯವಾದಗಳು .

    ಪ್ರತ್ಯುತ್ತರಅಳಿಸಿ
  2. ಅಂತಃಸತ್ವ ಮತ್ತು ನಿರೂಪಣೆಯ ವೈಶಿಷ್ಠ್ಯದಿಂದ ಕವನ ಮನಗೆದ್ದಿತು. ಹೆಣ್ಣಿನ ಶೋಚನೀಯ ಸಾಮಾಜಿಕ ಸ್ಥಿತಿಯ ಬಗೆಗಿನ ನಿಮ್ಮ ತುಡಿತ ಪ್ರಶಂಸನೀಯ.

    ಪ್ರತ್ಯುತ್ತರಅಳಿಸಿ
  3. Somashekhar Banavasi ಅರ್ಥಪೂರ್ಣವಾದ ಕವಿತೆ.ಹೃದಯ ತಟ್ಟುವುದು,ಮನ ಮುಟ್ಟುವುದು.ಜೀವನದಲ್ಲಿನ ಬಹು ಹೆಣ್ಣು ಮಕ್ಕಳ ಹಾಡು-ಪಾಡಿನ ಕಥೆಯನ್ನು ಓರಣವಾಗಿ ಚಿತ್ರಿಸಿದೆ.ಸಮಯ ಸಾಧಕರು ವ್ಯವಸ್ಥಿತ ಸಂಚು ರೂಪಿಸಿ ಬೇಳೆ,ತೀಟೆ ತೀರಿಸಿಕೊಳ್ಳುವ ಪರಿಯೇ ವ್ಯಥೆಯುಂಟು ಮಾಡುವುದು.ವ್ಯಭಿಚಾರದ ಹಾದರವು ಗಂಡು ಮನಸ್ಸಿನ ಹುಚ್ಚು ರಂಪಾಟದ ಮಖಕ್ಕೆ ಮಂಗಳಾರತಿ ಎತ್ತಿದೆ ಕವಿತೆಯಲ್ಲಿ.ಆಳ ಮತ್ತು ವಿಸ್ತಾರದ ವ್ಯಾಪಕತೆಯಲ್ಲಿ ಮೂಡಿದ ಈ ಕವಿತೆ ಬದುಕಿನಲ್ಲಿ ನಡೆಯುವ ನೈಜತೆಯ ಸತ್ಯದರ್ಶನ ಮಾಡಿಸಿದೆ.ತುಂಬಾ ಇಷ್ಟಪಟ್ಟು ಓದಿದೆ.ಕವಿತೆಯ ಆಶಯ ಇನ್ನೂ ಬಹಳ.ಅರ್ಥೈಸಲು ವ್ಯಾಪಕ ದೃಷ್ಠಿ ನೋಟವಿರಬೇಕು.
    ......................

    ಪ್ರತ್ಯುತ್ತರಅಳಿಸಿ
  4. ಅರ್ಥಪೂರ್ಣವಾದ ಕವಿತೆ.ಹೃದಯ ತಟ್ಟುವುದು,ಮನ ಮುಟ್ಟುವುದು.ಜೀವನದಲ್ಲಿನ ಬಹು ಹೆಣ್ಣು ಮಕ್ಕಳ ಹಾಡು-ಪಾಡಿನ ಕಥೆಯನ್ನು ಓರಣವಾಗಿ ಚಿತ್ರಿಸಿದೆ.ಸಮಯ ಸಾಧಕರು ವ್ಯವಸ್ಥಿತ ಸಂಚು ರೂಪಿಸಿ ಬೇಳೆ,ತೀಟೆ ತೀರಿಸಿಕೊಳ್ಳುವ ಪರಿಯೇ ವ್ಯಥೆಯುಂಟು ಮಾಡುವುದು.ವ್ಯಭಿಚಾರದ ಹಾದರವು ಗಂಡು ಮನಸ್ಸಿನ ಹುಚ್ಚು ರಂಪಾಟದ ಮಖಕ್ಕೆ ಮಂಗಳಾರತಿ ಎತ್ತಿದೆ ಕವಿತೆಯಲ್ಲಿ.ಆಳ ಮತ್ತು ವಿಸ್ತಾರದ ವ್ಯಾಪಕತೆಯಲ್ಲಿ ಮೂಡಿದ ಈ ಕವಿತೆ ಬದುಕಿನಲ್ಲಿ ನಡೆಯುವ ನೈಜತೆಯ ಸತ್ಯದರ್ಶನ ಮಾಡಿಸಿದೆ.ತುಂಬಾ ಇಷ್ಟಪಟ್ಟು ಓದಿದೆ.ಕವಿತೆಯ ಆಶಯ ಇನ್ನೂ ಬಹಳ.ಅರ್ಥೈಸಲು ವ್ಯಾಪಕ ದೃಷ್ಠಿ ನೋಟವಿರಬೇಕು.
    ............................

    ಪ್ರತ್ಯುತ್ತರಅಳಿಸಿ
  5. ರವಿಯವರೇ ಕವನ ಇಷ್ಟವಾಯ್ತು
    ಸಮಾಜದಲ್ಲಿ ಎಷ್ಟೊಂದು ಶಕುಂತಲೆ ಕುಂತಿಯರ ಕಥೆಗಳಿವೆ ಯಲ್ಲ !!!
    ಧನ್ಯವಾದ

    ಪ್ರತ್ಯುತ್ತರಅಳಿಸಿ
  6. ಮನವನ್ನು ಹಾಗೆ ತಟ್ಟಿ...ಚಿಂತನೆಗೆ ಹಚ್ಚುವ ಕವನ...
    ಹೆಣ್ಣಿನ ಬದುಕು ಬವಣೆಗಳ ಕುರಿತು ನೈಜ ಭಾವಗಳು ನಿರೂಪಿತವಾಗಿವೆ .
    ಚೆನ್ನಾಗಿದೆ ಸರ್...

    ಪ್ರತ್ಯುತ್ತರಅಳಿಸಿ
  7. ನಿರೂಪಣೆ ಅದ್ಬುತವಾಗಿದೆ. ವಿಶೇಷ ಶೈಲಿಯಲ್ಲಿ ಸಮಾಜದ ಹುಳುಕನ್ನೋ ವಿಪರ್ಯಾಸವನ್ನೊ ತೋರಿಸಿದ್ದೀರಿ. ಶಕುಂತಲೆ ಕಣ್ಣ ಮುಂದೆ ಹಾದುಹೋದಳು.

    ಪ್ರತ್ಯುತ್ತರಅಳಿಸಿ