ಭಾನುವಾರ, ಏಪ್ರಿಲ್ 17, 2011

ಗೋಡೆಯ ಮೇಲೊಂದು ಹಣತೆ

ಈಗಲೂ..ಧೂಳು ಹಿಡಿದು ಮಾಸಿದ
ನಿನ್ನ ಭಾವಚಿತ್ರವನ್ನು ಗೆದ್ದಲು
ತಿಂದಂತೆ ಅನ್ನಿಸುವುದೇ ಇಲ್ಲ..!

ಆಗಬಾರದ್ದೆಲ್ಲ ನಡೆದು
ದಿನಗಳು ಕೈ ಬೀಸಿವೆ ಎಂದರೂ
ಮುಖಕ್ಕೆ ಮೆತ್ತಿದ
ಒಣಗಿದ ಎಂಜಲಿಗೆ
ನೊಣಗಳು ಮುತ್ತಿಲ್ಲ..!

ಬೇಕೆಂದರೆ ಬೇಕು
ಬೇಡವೆಂದರೆ ಬೇಡ ಎನ್ನುವ
ನಮ್ಮೊಳಗೆ ಸಾವಿರ ನಾಕಾಬಂಧಿಗಳು
ಬಂಧ-ಸಂಬಂಧವನ್ನೇ ಮೀರಿ
ನರನಾಡಿ ಮೀಟಿದ ಸ್ಪರ್ಶ
ರೆಕ್ಕೆ ಕಟ್ಟಿಕೊಂಡ ನೆಮ್ಮದಿ
ಬೆಚ್ಚಿ ಬೀಳಿಸಿದ ಸುಖ
ಈಗ.. ಮಗುಚಿಟ್ಟ ಪುಸ್ತಕ..!
 
ಬರೆಯುವುದಿಲ್ಲ ನಾನು
ಮುಗಿದ ಕಥೆಗೆ ಮುನ್ನುಡಿ
ಎಲ್ಲಿಂದಲೋ ತೇಲಿ ಬಂದ
ನಿರ್ಧಾರದ ಇಟ್ಟಿಗೆಯಲ್ಲಿ
ನಾನು ಆ ಕಡೆ
ನೀನು ಈ ಕಡೆ
ಮಧ್ಯೆ ಭೀಮಾಕಾರವಾಗಿ
ಬೆಳೆದು ನಿಂತಿದೆ ಗೋಡೆ..!

ಈಗ ನಮಗಿಬ್ಬರಿಗೂ
ಸುತ್ತಲೂ ಕತ್ತಲೆ
ಬೆಳಕು ಬೇಕೆಂದಾಗ
ಹಚ್ಚ ಹೊರಡುತ್ತೇನೆ
ಗೋಡೆಯ ಮೇಲೊಂದು ನೆನಪಿನ ಹಣತೆ
ಹಣತೆ ನಂದಿದಂತೆಲ್ಲಾ ಗೋರಿಯಾಗುತ್ತೇನೆ
ಗೋಡೆಯ ಕೆಳಗೆ..!

-ರವಿ ಮೂರ್ನಾಡ್‍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ