ಗುರುವಾರ, ಜೂನ್ 28, 2012

ಚಿಗುರೆಲೆಯ ಹಾಲ ಧ್ವನಿ



ಅವನ ನಗುವಿನ ಉರಿ
ಇವಳ ಪ್ರಾಣದ ಪರಿ
ಗರ್ಭದಲಿ ಚಿಗುರೆಲೆಗೆ
ಹಾಲ ಧ್ವನಿ !

ಮೋಡಗಳ ಗುದ್ದುತ್ತಿದೆ
ಮಳೆ ಬಿತ್ತು ಹುಡುಕುತ್ತೇನೆ
ಇಳೆಯ ಸುಕ್ಕು ಗೆರೆಗೆ
ಬೆವರ ಹನಿ !

ಬಾಯಾರಿ ತುಟಿ ಹರಿದು
ಬೆವರೇರಿ ಗಬ್ಬೆದ್ದು
ನಾಲೆಯಲ್ಲಿ ನೀರಿಲ್ಲ
ಗಂಟಲವರೆಗೆ !

ಈ ಖಾಲಿ ಕಮ್ಮಟದಿ
ಹನಿದು ರಕುತಕೆ ಜೀವ
ಸಿಕ್ಕಿಲ್ಲ ಸವರಿ ರುಚಿ
ತುಟಿಯವರೆಗೆ !

ಬಾನಾಡಿ ಹೆಜ್ಜೆಗೆ ನೀನು
ಬೀಡಾಡಿ ಜಗತ್ತಿನ ಅವನಿ
ಮಡಿಲಲ್ಲಿ ಮಕ್ಕಳ ಕತೆಗೆ
ತಾಯಿ ನಾನು !

ಸುರಿಯಲಿದೋ ತಾಪಕೆ ವೀರ್ಯ
ಬಿರುಕಿಟ್ಟು ಅಳುತ್ತಿದೆ ಹನಿ
ಉಪ್ಪು ನೀರಿನ ಕಣ್ಣಿಗೆ
ನಿನ್ನ ಕನಸು !

ಬಿರುಸು ಮೋಡಕೆ ತೆರೆದು
ಮೈಯೆದ್ದು ಮೊರೆಯುತಿದೆ
ಗುಡುಗು ಮಿಂಚಿಗೆ ಮರೆತು
ಸುಳಿದ ಮನಸು !
-ರವಿ ಮೂರ್ನಾಡು, ಕ್ಯಾಮರೂನ್

1 ಕಾಮೆಂಟ್‌:

  1. ಕವಿಯ ಸಶಕ್ತತೆಯು ಕಾವ್ಯದಲ್ಲಿ ಬಿಂಬಿತವಾದಾಗಲೇ ದಿವ್ಯ ಸೃಷ್ಟಿ.

    "ಉಪ್ಪು ನೀರಿನ ಕಣ್ಣಿಗೆ
    ನಿನ್ನ ಕನಸು!"

    ಎನ್ನುವಲ್ಲೇ ನಿಮ್ಮ ಪ್ರೌಢತೆಯು ಮನಗೆಲ್ಲುತ್ತದೆ.

    ಅಂತಯಕ್ಕೆ ಬಂದಾಗ ಅದನ್ನೇ ಮನಸ್ಸಿಗೆ ಒಗ್ಗಿಸುವ ಪರಿಯೂ ಸೋಜಿಗ.

    ಪ್ರತ್ಯುತ್ತರಅಳಿಸಿ