ಬುಧವಾರ, ಜನವರಿ 2, 2013

ಹಸಿವು !



ಹುಟ್ಟಿನಿಂದಲೇ ಸತ್ಯಾಗ್ರಹ-
ಮನದಿಚ್ಚೆಗೆ ಹೂಡುತಿದೆ
ಉದ್ದೇಶವೇ ಕೊಲ್ಲುವುದು |

ಆಳದಾಳಕೆ ಕೇಳುವ
ಕಾರಣಗಳ ಗುರಿ ಚಂಚಲ |
ಹೊರಳುತ್ತಾ ಹೊಟ್ಟೆಯೊಳಗೆ
ಹುಡುಕುತಿದೆ ಪರಿಹಾರ
ಗುಜರಿ ತುಂಬುವ ಚೀಲ |

ಸಿಗದಿದ್ದರೋ ?!-
ಮಹಾಕಾಯವಾಗಿ
ಕಟ್ಟಕಡೆಯ ನೋವುಗಳ ತಬ್ಬಿ
ಎಲ್ಲಾ ಹುಣ್ಣುಗಳು ಉಬ್ಬಿ
ಆರ್ಬುದ ರೋಗವಾಗಿ
ಹೊಟ್ಟೆಗೆ ಸಿಗಿಯುವುದು |

ತೃಪ್ತಿ ಕೊನೆಗಳ ತಡವಿ
ನ್ಯಾಯ ನಡೆಗಳ ತಿರುವಿ
ಆಸೆ ಪ್ರವಾಹವಾಗಿ
ಮನಕೆ ಜಿಗಿಯುವುದು |
ನಾಶವಾಗದ ಅತೃಪ್ತಿಗಳು
ಲಾಭ-ನಷ್ಟವಿಲ್ಲದ ತಣಿವುಗಳು |

ಸತ್ಯಾಗ್ರಹದ ಗುರಿಗಳೆಲ್ಲವೂ
ಪ್ರಮಾಣದಲಿ ದೊಡ್ಡದು
ಅಲ್ಪದಲಿ ತಣಿದು ಅಷ್ಟು-
ಹೊಟ್ಟೆಗೆ ಅನ್ನ ಕುಳಿತು
ಆಸೆಗೆ ತೃಪ್ತಿ ಸುಳಿಯುತಿದೆ
ಅರಿವಿಲ್ಲದ ನಿದ್ದೆಯ ಸುಖಕೆ |

ಮುಖವಾಡ ಕಳಚುವ
ಬೀದಿ ಬದುಕು ಹಸಿವುಗಳು
ಸ್ವಭಾವದಲಿ ಮೇಲ್ಮಟ್ಟಕೆ
ರಕ್ತ ನೆಕ್ಕುವುದು
ಅತೀ ಕೆಳಮಟ್ಟಕೆ |

ಇಬ್ಬಗೆ ಹಸಿವಿಗೆ
ಗೌರವ ಪ್ರಶ್ನೆಯ ಗುಣಗಳಿವೆ
ಜಗತ್ತಿನ ಸ್ಥಿತಪ್ರಜ್ಞೆಗೆ
ಉತ್ತರಗಳು ಮಗ್ಗುಲು ಮಗುಚಿವೆ|
-ರವಿ ಮೂರ್ನಾಡು.
ಚಿತ್ರಕೃಪೆ:ಗೂಗಲ್ ಅಂತರ್ಜಾಲ